ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನ, ಹಿಮ್ಮೇಳ ಮತ್ತು ಪ್ರಸಂಗ ಸಾಹಿತ್ಯ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಡಿಸೆ೦ಬರ್ 1 , 2013

“ಕಲೆ” ಎಂದರೇನು? ನಿರೂಪಿಸಲು ತುಸು ಕಷ್ಟ ವಾದ ಚಿಕ್ಕ ಶಬ್ದವಿದು. ಯಾವುದು ಆತ್ಮದರ್ಶನ ಮಾಡಿಸುತ್ತದೋ ಅದು ಕಲೆ ಅನ್ನುತ್ತಾರೆ ಅರವಿಂದರು “ಆರ್ಟ್ ಈಸ್ ಫ಼ಾರ್ ಅರ್ಟ್ಸ್ ಸೇಕ್” ಎಂಬ ನುಡಿಗಟ್ಟು‌ ಇಂಗ್ಲೀಷಿನಲ್ಲಿದೆ. ತನ್ನ ಬದುಕಿನಲ್ಲಿ ತಲೆದೋರಬಹುದಾದ ಸುಖ-ದು:ಖ, ಆಸೆ-ನಿರಾಶೆ, ಸಂತೋಷ-ಸಂತಾಪ, ಪ್ರೀತಿ- ದ್ವೇಷ ಮುಂತಾದ ಭಾವನೆಗಳನ್ನು ಒಡನಾಡಿಗಳೊಂದಿಗೆ ಹಂಚಿಕೊಳ್ಳಬೇಕೆಂಬ ಅಭಿಲಾಷೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸ್ವಾಭಾವಿಕವಾಗಿ ಇರುತ್ತದೆ. ಇದನ್ನು ಸುಂದರವಾಗಿ ಪ್ರಕಟಿಸುವ ಮಾಧ್ಯಮವೇ ಕಲೆ.

ಬಡಗು ತಿಟ್ಟಿನ ಒಡ್ಡೋಲಗದ ಒ೦ದು ದೃಶ್ಯ
ಸಂಗೀತ, ನಾಟಕ, ಸಾಹಿತ್ಯ, ನೃತ್ಯ, ಚಿತ್ರ, ಶಿಲ್ಪ, ಮುಂತಾದ ಬೇರೆಬೇರೆ ಕಲಾ ಪ್ರಾಕಾರಗಳಿವೆ. ಕಲೆಗಳ ಆಸ್ವಾದನೆಯಿಂದ ಆನಂದ, ಮನೋರಂಜನೆ, ಉಲ್ಲಾಸ, ತೃಪ್ತಿ ಮುಂತಾದ ಮಾನಸಿಕ ಪರಿಣಾಮಗಳು ಉಂಟಾಗಬೇಕೆ ವಿನಹಾ ಅವುಗಳನ್ನು ಮತ, ಧರ್ಮ ರಾಜಕೀಯ ಪ್ರಚಾರ ಸಾಮಾಜಿಕ ನಡವಳಿಕೆ ಮುಂತಾದ ಲೌಕಿಕ ಉದ್ದೇಶ ಸಾದನೆಗೆ ಬಳಸುವುದು ಸರಿಯಲ್ಲ ಎನ್ನುವುದು ಆಂಗ್ಲನುಡಿಗಟ್ಟಿನ ಸಾರಂಶ. ಈ ನೆಲೆಯಲ್ಲಿ ದೇಶದ ಪ್ರತಿಯೊಂದು ಕಲೆಯೂ ಮನೋರಂಜನೆಯೊಂದಿಗೆ ಭೋದಪ್ರದವು ಆಗಿದೆ. ಕೆಲವೊಮ್ಮೆ ಅದು ಆರಾಧನ ಕಲೆಯೂ ಆಗಿದೆ. ಈ ದೃಷ್ಟಿಯಿಂದ ನೋಡಿದಾಗ ಭಾರತೀಯವಾದ ಇತರ ಎಲ್ಲಾ ಕಲೆಗಳಿಗಿಂತಲೂ ಕರಾವಳಿ ಕರ್ಣಾಟಕದ ಗಂಡು ಕಲೆ ಎನ್ನಬಹುದಾದ ಯಕ್ಷಗಾನವು ಅಗ್ರಸ್ಠಾನದಲ್ಲಿ ನಿಲ್ಲುತ್ತದೆ.

ಯಕ್ಷಗಾನ ಎಂಬ ಪದದಲ್ಲಿ “ಯಕ್ಷ” ಎಂಬುವುದು ‘ನೃತ್ಯ’ವನ್ನೂ, ‘ಗಾನ’ ಎಂಬುದು ಸಂಗೀತವನ್ನೂ ಪ್ರತಿನಿಧಿಸುವುದಾದರೂ ಒಟ್ಟಾರ್ಥದಲ್ಲಿ ಇದು ನೃತ್ಯ ಪ್ರಧಾನವಾದ ರಂಗಕಲೆ. ಇದರಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರ, ಮತ್ತು ಅಭಿನಯ ಎಂಬ ಐದು ಅಂಗಗಳಿವೆ. ಇವುಗಳು ಈ ಕಲಾಮಾದ್ಯಮದ ನೆಲೆಗಟ್ಟು ಅರ್ಥಾತ್ ಪಂಚಾಂಗವೇ ಆಗಿದೆ. ಈ ನೆಲೆಗಟ್ಟು ಭದ್ರವಾದರೆ ಕಲೆಯು ಸ್ಶಿರವಾಗಿ ಸುಸಂಗತವಾಗಿ ಉಳಿಯ ಬಹುದು. ಇದು ನೃತ್ಯ, ಹಾವಭಾವ, ಗಾನ, ಮಾತುಗಾರಿಕೆ, ವೇಷಭೂಷಣಗಳು ಒಟ್ಟು ಸೇರಿ ಸಮ್ಮಳಿತವಾದ ಸಮಷ್ಟೀ ಕಲೆ.

ಇದಲ್ಲದೆ ಇದರಲ್ಲಿ ವಿಸ್ಕ್ರತವು, ಗಂಭೀರವೂ ಆದ ಪ್ರಸಂಗಗಳೆಂಬ ಸಾಹಿತ್ಯವಿದೆ. ಅದ್ಭುತವಾದ ಮುಖವರ್ಣಿಕೆ, ವೇಷಭೂಷಣಗಳ ಚಿತ್ರವಿದೆ. ಎಲ್ಲಕ್ಕಿಂತ ಸ್ವಪ್ರತಿಭೆಯಿಂದ ತಾತ್ಕಲಿಕವಾಗಿ ಸ್ಪುರಿಸುವ ಮಾತುಗಾರಿಕೆ ಇದೆ. ಈ ಮಾತುಗಾರಿಕೆಯಲ್ಲಿ ಭಾರತದ ಪೌರಾಣಿಕ ಕಥಾನಕಗಳ ವಿವರಣೆ, ಮಹಾಪುರುಷರ ವ್ಯಕ್ತಿತ್ವ, ನ್ಯಾಯ, ನೀತಿ, ಸದಾಚಾರಗಳ ಸತ್ಪರಿಣಾಮ, ಅನ್ಯಾಯ, ಅನೀತಿಗಳ ದುಷ್ಪರಿಣಾಮ, ಮುಂತಾದ ಹಲವು ವಿಷಯಗಳ ಮಹಾಪೂರವೇ ಯಕ್ಷಗಾನದ ಮಾತುಗಾರಿಕೆಯಲ್ಲಿ ಹರಿದು ಬರುತ್ತದೆ. ಇಲ್ಲಿ ರಾಮಾಯಣ, ಮಹಾಭಾರತ ಭಾಗವತದಿಂದ ಆಯ್ದ ಪುಣ್ಯಕಥಗಳೇ ಪ್ರದರ್ಶಿಸಲ್ಪಡುತ್ತದೆ. ಸಾಮಾನ್ಯವಾಗಿ ಇದನ್ನು ಬಯಲಾಟವೆಂದು ಕರೆಯುವುದು ವಾಡಿಕೆ. ಸುತ್ತಲು ಕತ್ತಲೆ ಕವಿದಾಗ ದೊಂದಿಯ ಬೆಳಕಿನಲ್ಲಿ ಬಯಲು ರಂಗಸ್ಥಳದಲ್ಲಿ ಪ್ರದರ್ಶಿಸಲ್ಪಡುವುದರಿಂದ ಬಯಲಾಟವೆಂದು ಕರೆಯುತ್ತಾರೆ. ವಿಷ್ಣುವಿನ ಹತ್ತು ಅವತಾರಗಳನ್ನು ಕಥಾರೂಪದಲ್ಲಿ‌ ಅಡುವುದರಿಂದ ‘ದಶಾವತಾರ ಆಟ’ ಎಂದೂ ಕರೆಯುತ್ತಾರೆ. ಅನೇಕ ಕಲಾವಿದರು ಕೂಡಿ ಅಡುವುದರಿಂದ ‘ದಶಾವತಾರ ಮೇಳ’ವೆಂದೂಕರೆಯುತ್ತಾರೆ.

ತೆ೦ಕು ತಿಟ್ಟಿನ ರಾಕ್ಷಸ ವೇಷಗಳು. ( ಚಿತ್ರ ಕೃಪೆ : ಉಲ್ಲಾಸ್ )
ಯಕ್ಷಗಾನವು ಕನ್ನಡ ನಾಡಿನ ಕಲೆ. ಬೇರೆ ಬೇರೆ ರಾಜ್ಯಗಳಲ್ಲಿ ಕಥಕ್ಕಳಿ, ಮೋಹಿನಿಯಾಟ್ಟಂ, ಕೊರವಂಜಿ, ನಾಟಕ, ದೊಡ್ಡಾಟ, ಹೇಗೆ ಪ್ರಸಿದ್ದವೋ ಹಾಗೆಯೇ ಕರ್ನಾಟಕದಲ್ಲಿ ಯಕ್ಷಗಾನ. ಇದರಲ್ಲಿ ಮುಖ್ಯವಾಗಿ ಮೂರು ಪ್ರಭೇದಗಳು ತೆಂಕು ತಿಟ್ಟು, ಬಡಗುತಿಟ್ಟು ಅಥವಾ ನಡುತಿಟ್ಟು ಮತ್ತು ಬಡಾಬಡಗುತಿಟ್ಟು. ಸಾದಾರಣವಾಗಿ ಕಾಸರಗೋಡಿನಿಂದ ಉಡುಪಿವರೆಗಿನ ಪ್ರ್ರಾಂತ್ಯವನ್ನು ತೆಂಕು-ತಿಟ್ಟೆಂತಲು, ಉಡುಪಿಯಿಂದ ಬೈಂದೂರಿನವರೆಗೆ ನಡು-ತಿಟ್ಟೆಂತಲೂ, ಹೊನ್ನಾವರದಾಚೆ ಪ್ರಾಂತ್ಯವನ್ನು ಬಡಾಬಡಗು ತಿಟ್ಟಿನ ಪ್ರಾಂತ್ಯವೆಂದು ಗುರುತಿಸಬಹುದು.

ಆಯಾ ಪ್ರಾಂತ್ಯದ ಕಲಾವಿದರನ್ನು ಆಯಾ ತಿಟ್ಟಿನ ಕಲಾವಿದರೆಂದು ಗುರುತಿಸುವುದು ವಾಡಿಕೆ. ಉದಾಹರಣೆಗೆ ಕುರಿಯ ವಿಠಲ ಶಾಸ್ತ್ರಿ, ಶೇಣೀ ಗೋಪಾಲಕೃಷ್ಣ ಭಟ್, ಕುಂಬಳೆ ಸುಂದರ ರಾವ್, ಗೋವಿಂದ ಭಟ್, ಬಲಿಪ ನಾರಯಣ ಭಾಗವತ್ ಮುಂತಾದವರನ್ನು ತೆಂಕುತಿಟ್ಟಿನ ಕಲಾವಿದರೆಂತಲೂ, ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ವೀರಭದ್ರ ನಾಯಕ್, ಶಿರಿಯಾರ ಮಂಜು ನಾಯಕ್, ಅರಾಟೆ ಮಂಜುನಾಥ, ಕೋಟ ವೈಕುಂಠ, ಮರವಂತೆ ನರಸಿಂಹದಾಸರು, ಕುಂಜಾಲು ಶೇಷಗಿರಿ ಕಿಣಿ, ರಾಮಚಂದ್ರ ನಾವಡ, ನಗರ ಜಗನ್ನಾಥ ಶೆಟ್ಟಿ, ಮುಂತಾದವರನ್ನು ನಡುತಿಟ್ಟಿನ ಕಲಾವಿದರೆಂತಲೂ, ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭ್ಹು ಹೆಗಡೆ, ಕುಮಟ ಗೋವಿಂದ ನಾಯಕ್, ಗಜಾನನ ಹೆಗಡೆ, ಕೃಷ್ಣಯಾಜಿ ಮುಂತಾದವರನ್ನು ಬಡಾಬಡಗಿನ ಕಲಾವಿದರೆಂದು ಗುರುತಿಸುತ್ತೇವೆ. ಈ ಮೂರೂ ತಿಟ್ಟುಗಳಲ್ಲಿ ವೇಷಭ್ಹೂಷಣ, ಹಾಡುಗಾರಿಕೆ, ಅಭಿನಯ, ನೃತ್ಯ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಾಕಷ್ಟು ವ್ಯತ್ಯಾಸವಿದೆ.

ಯಕ್ಷಗಾನ ಹಿಮ್ಮೇಳ


ಭಾಗವತ

ಯಕ್ಷಗಾನವು ಗಾನ ಪ್ರಧಾನವಾದ ಕಲೆ. ನೃತ್ಯ, ನ್ರತ್ತ, ಅಭಿನಯ, ವಾದನ ಮಾತುಗಾರಿಕೆಗಳಿದ್ದರೂ ಗಾನಕ್ಕೆ ಒಂದು ಶ್ರೇಷ್ಠ ಸ್ಠಾನವಿದೆ. ಗಾನಕಲೆಯನ್ನು ವಿವರಿಸುವ ಶಾಸ್ತ್ರಕ್ಕೆ ಗಾ೦ಧರ್ವ ವೇದವೆಂದು ಹೆಸರು. ದೇಶೀ ಗಾನದ ಒಂದು ಪ್ರಭೇದವೇ ಯಕ್ಷಗಾನ. ಇಲ್ಲಿ ಹಾಡುವವರಿಗೆ ಭಾಗವತರೆಂದು ಹೆಸರು. ಇಲ್ಲಿ ಭಾಗವತರಿಗೆ ಪ್ರಥಮ ಸ್ಥಾನ. ಅವನೇ ಮೊದಲನೆ ವೇಷಧಾರಿ. ಒಂದು ಆಟವನ್ನು ಆಡಿಸುವ ಸಂಪೂರ್ಣ ಹೊಣೆ ಭಾಗವತನದ್ದು. ಸ್ಪಷ್ಠವಾದ ಸಾಹಿತ್ಯ ಜ್ಞಾನ, ನಿಖರವಾದ ತಾಳಗಳ ಪರಿಚಯ, ರಾಮಾಯಣ, ಭಾರತ, ಇನ್ನಿತರ ಪುರಾಣಗಳ ಅನುಭವ, ಒಟ್ಟಾರೆ ಒಬ್ಬ ಸಿನೀಮ, ಅಥವ ನಾಟಕ ನಿರ್ದೇಶಕನಿಗಿರುವಷ್ಠು ಹೊಣೆಗಾರಿಕೆ ಭಾಗವತನಿಗಿರಬೇಕಾಗುತ್ತದೆ.

ಯಕ್ಷಗಾನವೆಂಬ ಹೆಸರೇ ಗಾನ ಪ್ರಾಧಾನ್ಯವನ್ನು ತಿಳಿಸುತ್ತದೆ. ಭಗವಂತನನ್ನು ಬಣ್ಣಿಸುವ ಕಥಾನಕಗಳೇ ಪ್ರಸಂಗವಾಗಬೆಕೆಂಬುದನ್ನು ಭಾಗವತರಾಟ‌ ಎಂಬ ಪರ್ಯಾಯ ಪದ ಸೂಚಿಸುತ್ತದೆ. ಪರಂಪರಾನುಗತ ಸಂಗೀತ ಹಾಡುತ್ತ ಬಂದ ಕೆಲವು ಮನೆತನಗಳಿಗೆ ಭಾಗವತರೆಂಬ ವಂಶನಾಮವಿದೆ. ಮೇಳದಲ್ಲಿ ವೇಷಧಾರಿಗಳ ಗಣನೆ ಆರಂಭವಾಗುವುದು ಎರಡನೇ ವೇಷದಿಂದ. ಆದರೆ ಭಾಗವತ ಪ್ರಥಮ ವೇಷಧಾರಿ. ಆತನಿಗಿರುವ ಸಂಭಾವನೆ ಅನ್ಯರಿಗೆ ದುರ್ಲಭ. ಒಂದು ಮೇಳದಲ್ಲಿ ಎರಡನೆ ವೇಷಧಾರಿಯ ಸ್ಥಾನಕ್ಕೆ ಮುಟ್ಟಲು ಬಹುವರ್ಷದ ತಿರುಗಾಟ, ಹಿರಿತನ, ಪ್ರಭಾವಿತನ, ಮುಂತಾದವುಗಳು ಬೇಕಾಗುತ್ತವೆ. ಇದಕ್ಕಿಂತ ಉನ್ನತ ಸ್ಥಾನ ಕಲಾವಿದನಿಗೆ ಇನ್ನಿಲ್ಲ. ಇಷ್ಟ್ಟಾದರೂ ಅವನು ದ್ವೀತೀಯ ವೇಷಧಾರಿ. ಅಂದರೆ ಭಾಗವತನೇ ಅದ್ಯವೆಂಬುದು ವೇದ್ಯವಾಗುತ್ತದೆ. ಯಕ್ಷಗಾನದ ಸಭಾಲಕ್ಷಣದಲ್ಲಿ ಭಾಗವತನ ಕುರಿತಾದ ಶ್ಲೋಕದಲ್ಲಿ, ಭ-ಕಾರವು ಭಗವದ್ಬಕ್ತಿಗೂ, ಗ-ಕಾರವು ಗರ್ವರಹಿತಕ್ಕೂ, ವ- ಕಾರವು ವಾಕ್ಯಾರ್ಥ ಜ್ಞಾನಕ್ಕೂ, ತ-ಕಾರವು ತಾತ್ವಿಕ ವಿಚಾರಕ್ಕೂ ಅನ್ವೈಸಿ ಈ ನಾಲ್ಕು ಅಕ್ಷರಗಳ ಸಮಷ್ಠಿ ಸ್ವರೂಪವೇ ಭಾಗವತ.

ಭಾಗವತನು ಆಸ್ತಿಕನಾಗಿದ್ದು ಪುರಾಣ ಪ್ರಪಂಚವನ್ನು ಓದಿದವನಾಗಿರಬೇಕು. ಕಥಾನಕಗಳ ತಿರುಳು ತಿಳಿದಿದ್ದು, ಪದ್ಯಗಳು ಕಂಠಪಾಠವಾಗಿರಬೇಕು. ಕೊರಳು ಹಿಡಿತದಲ್ಲಿದ್ದು. ಉಚ್ಚಾರ ದೋಷವಿರಬಾರದು. ತಾಳ , ಕಾಲ, ಶ್ರುತಿ, ಲಯಗಳು ಒಂದಾಗಿ ಹೊಂದಿಕೊಂಡಿರಬೇಕು. ಸಂಗೀತದ ಶಾಸ್ತ್ರೀಯ ರಾಗಗಳ ಪರಿಚಯವಿರಬೇಕು. ಮೇಳವೊ೦ದರ ಪ್ರದರ್ಶನ ಸಾಂಗವಾಗಿ, ಸುಂದರವಾಗಿ ಮೂಡಿಬರಲು ಸರ್ವಶ್ರೇಷ್ಟ ಭಾಗವತನಿರಬೇಕು. ಸುಂದರ ಶಾರೀರ‌ ಒಂದೆ ಸಾಲದು, ರೂಡಿಸಿಕೊಂಡ‌ ಅನುಭವಗಳು ಮುಖ್ಯ. ಯಕ್ಷಗಾನದಲ್ಲಿ ಪ್ರತ್ಯೇಕ ನಿರ್ದೇಶಕನಿಲ್ಲ, ಭಾಗವತನೇ ನಿರ್ದೇಶಕ. ಅವನೇ ಆಟ ಆಡಿಸುವವ.

ಮದ್ದಳೆ ಮತ್ತು ಚೆ೦ಡೆ


ಯಕ್ಷಗಾನವೆಂದಲ್ಲ ಎಲ್ಲ ಸಂಗೀತ ಪ್ರಾಕಾರಕ್ಕೂ ವಾದನಗಳು ಬೇಕೇ ಬೇಕು. ಹಿಂದುಸ್ಠಾನಿ ಸಂಗೀತಕ್ಕೆ ತಬ್ಲಾ ಸಾಥಿಯಾದರೆ, ಕರ್ನಾಟಕಿ ಸ೦ಗೀತ ಮೃದ೦ಗ, ಖಂಚೀರ. ಕಥಕ್, ಮಣಿಪುರಿ ಮುಂತಾದ ನೃತ್ಯ ಪ್ರಾಕಾರದಲ್ಲು ಪಕ್ಕವಾದ್ಯಗಳಿವೆ. ಯಕ್ಷಗಾನದಲ್ಲಿ ಮದ್ದಳೆಯೊಂದಿಗೆ ಚೆ೦ಡೆಯಂತ ಕೋಲುಗಳ ಸಹಾಯದಿಂದ ನುಡಿಸುವ ವಾದ್ಯವಿರುತ್ತದೆ. ತೆಂಕುತಿಟ್ಟಿನ ಮದ್ದಳೆಯು ಕರ್ನಾಟಕಿ ಸಂಗೀತದ ಮೃದ೦ಗದಂತೂ ಇಲ್ಲದೆ, ಬಡಗುತಿಟ್ಟಿನ ಮದ್ದಳೆಯಂತಲೂ ಇರದೆ ಪ್ರತ್ಯೇಕವಾಗಿದೆ. ಅತ್ಯಂತ ಏರು ಶ್ರುತಿಯಲ್ಲಿ ಕರ್ಣಾನಂದ ನೀಡುವ ನಾದ ಮಾಧುರ್ಯವುಳ್ಳ ಏರು ಮದ್ದಳೆಯೆಂಬ ವಾದ್ಯ ಬಡಗುತಿಟ್ಟಿನ ವೈಶಿಷ್ಯ. ಬಡಗು ತಿಟ್ಟಿನ ಮದ್ದಳೆಯಷ್ಟು ವೈಶಿಷ್ಟ್ಯಪೂರ್ಣವಾದ ನಾದಮಾದುರ್ಯವುಳ್ಳ ಚರ್ಮವಾದ್ಯವೇ ಬೇರೆ ಇರಲಿಕ್ಕಿಲ್ಲ. ಅದರಲ್ಲಿ ಹೊರಹೊಮ್ಮುವ ಛಾಪು ಗುಂಪುಗಳ ನಾದಗಳು ಸುಲಭದಲ್ಲಿ ಶ್ರುತಿಯಲ್ಲಿ ಲೀನವಾಗುತ್ತವೆ. ಬಡಗು ತಿಟ್ಟಿನ ಮದ್ದಳೆ ಸಮ ಶ್ರುತಿಯಲ್ಲಿರುವುದರಿಂದ ತಾಳ ಮದ್ದಳೆ, ಚೆ೦ಡೆ ಮೂರರ ಸ್ವರವೂ ಸೇರಿ ಒಂದು ಶ್ರುತಿ ಸಾಮರಸ್ಯದ ಗುಂಗು ಏರ್ಪಡುತ್ತದೆ.

ಬಡಗು ತಿಟ್ಟು ಹಾಗೂ ತೆ೦ಕು ತಿಟ್ಟಿನ ಚೆ೦ಡೆವಾದನ
ಹನೆಮರ, ತೆಂಗಿನ ಮರ ಅಥವಾ ಖದಿರೆ ಮರದಿಂದ ತಯಾರಾಗುವ ಕಳಸಿಗೆಗೆ ಎಡ ಬಲದ ಕಬ್ಬಿಣದ ರಿಂಗ್ ಗಳಿಗೆ ಚರ್ಮವನ್ನು ಹೊಂದಿಸಿ ಹಗ್ಗವನ್ನು ಬಿಗಿದು ಮಾಡಿದ ವಾದವೇ ಚೆ೦ಡೆ. ‘ಆಟಕ್ಕೆ ಅಬ್ರ ತೋಟಕ್ಕೆ ಗೊಬ್ರ’ ಎಂಬ ಕುಂದಾಪುರ ಆಡು ನುಡಿಯಂತೆ ಚೆ೦ಡೆ ಯಕ್ಷಗಾನದಲ್ಲಿ ಹಾಸುಹೊಕ್ಕಗಿದೆ. ಇದನ್ನು ಕೋಲುಗಳ ಸಹಾಯದಿಂದ ಬಾರಿಸುವುದು ರೂಡಿ. ತೆಂಕಿನಲ್ಲಿ ನಿಂತುಕೊಂಡು, ಬಡಗಿನಲ್ಲಿ ಕುಳಿತು ಕೊಂಡು, ಹಾಗೆಯೆ ತೆಂಕಿನಲ್ಲಿ ಭಾಗವತರ‌ ಎಡಭಾಗದಲ್ಲೂ, ಬಡಗಿನಲ್ಲಿ ಭಾಗವತರ ಬಲಭಾಗದಲ್ಲೂ ಚೆ೦ಡೆಯವರಿರುತ್ತಾರೆ.

ಮದ್ದಳೆವಾದಕರಿಗೆ ಭಾಗವತರಷ್ಟೇ ಜವಬ್ದಾರಿ, ತಿಳುವಳಿಕೆ ಬೇಕಾಗುತ್ತದೆ. ಯಕ್ಷಗಾನದಲ್ಲಿ ಮದ್ದಳೆವಾದನದಷ್ಟು ಸುಧಾರಣೆಯಾದ ಅಂಗ ಬೇರೆ ಇರಲಿಕ್ಕಿಲ್ಲ. ಭಾಗವತ ಮತ್ತು ನಟನ ನಡುವಿನ ಸಮನ್ವಯಕಾರನೇ ಮದ್ದಳೆಗಾರ. ಹಾಡುಗಾರನ, ನಟನ ಮನೋದರ್ಮಕ್ಕನುಗುಣವಾಗಿ ತಿಳಿದು ನುಡಿಸ ಬೇಕು. ತಾನು ಕುಳಿತು ನುಡಿಸುವ ಮದ್ದಳೆ ಚೆ೦ಡೆ ವಾದಕನ್ನೆಂದು ಸುಮ್ಮನೆ ಕುಳಿತುಕೊಳ್ಳದೆ ನಡೆಯುತ್ತಿರುವ ಕಥಾಪ್ರಸಂಗದ ಭಾಗವಾಗಿರಬೇಕು. ಇದರಿಂದ ದಿ. ಕೆಮ್ಮಣ್ಣು ಆನಂದ ರಾವ್, ರಾಮಕೃಷ್ಣ ಮಂದಾರ್ತಿ, ಚಿಪ್ಪಾರು ಕೃಷ್ಣಯ್ಯ ಬಲ್ಲಾಲ್, ದಿವಾಣ ಭೀಮ ಭಟ್‌ ಮುಂತಾದವರು ಉತ್ತಮ ಚೆ೦ಡೆ ವಾದಕರಾಗಿ, ಬೇಳಂಜೆ ತಿಂಮ್ಮಪ್ಪ ನಾಯಕ್, ದುರ್ಗಪ್ಪ ಗುಡಿಗಾರ್, ಕರ್ಕಿ ಪ್ರಭಾಕರ ಭಂಡಾರಿ, ಶಂಕರ ಭಾಗವತ, ಪದ್ಯಾಣ ಶಂಕರನಾರಾಯಣ ಭಟ್ಟರು ಉತ್ತಮ ಮದ್ದಳೆವಾದಕರೆಂದು ಗುರುತಿಸಿಕೊಂಡಿದ್ದಾರೆ.

ಚೆ೦ಡೆಯೊಂದು ಸ್ವತಂತ್ರ ವಾದನವಲ್ಲ. ಮದ್ದಳೆ ಪೆಟ್ಟುಗಳಿಂದ ಕೂಡಿದ ಚೆ೦ಡೆಯು ಕೇಳಲು ಹಿತವಾಗಿರುತ್ತದೆ. ಬರೀ ಚೆ೦ಡೆಯ ಶಬ್ದ ಕೇಳಲು ಸಾದ್ಯವಿಲ್ಲ. ಇಂದು ಕೇವಲ ಗಿಮಿಕ್ಸಿಗಾಗಿ ಕೆಲವು ನೃತ್ಯ ಪ್ರಧಾನವಾದ ಶೃ೦ಗಾರ ಪದ್ಯಗಳಿಗೆ ಚೆ೦ಡೆ ಮದ್ದಳೆಗಳನ್ನು ಬೇರೆ ಬೇರೆಯಾಗಿ ಬಾರಿಸುವ ಕ್ರಮ ಬಂದಿದೆ. ಇಲ್ಲಿ ಯಾವುದೇ ರಸ ನಿರ್ಮಾಣವಾಗಲು ಸಾದ್ಯವಿಲ್ಲ. ವೇಷಧಾರಿ ಮತ್ತು ಭಾಗವತರ ಮಟ್ಟದಲ್ಲಿ ವಾದಕರು ಗುರುತಿಸಲ್ಪಡದಿರುವುದು ಈ ರಂಗದ ದೌರ್ಭಾಗ್ಯ. ಯಕ್ಷಗಾನದಲ್ಲಿ ಶ್ರುತಿಯೇ ಪ್ರಧಾನ. ಶ್ರುತಿ ಇಲ್ಲದೆ ಆಟ ಸಾದ್ಯವಿಲ್ಲ. ಮೇಲೆ ಹೇಳಿದ ಎಲ್ಲವು ಒಂದೆ ಶ್ರುತಿಯಲ್ಲಿದ್ದರೆ ಚಂದ. ಮಾತುಗಾರಿಕೆಯೂ ಸೇರಿ ಎಲ್ಲವೂ ಒಂದೇ ಶ್ರುತಿಯಲ್ಲಿದ್ದಾಗ ಮಾತ್ರ ಒಂದು ಶ್ರುತಿ ಸಾಮರಸ್ಯದ ಗುಂಗು ಏರ್ಪಡುತ್ತದೆ. ಯಕ್ಷಗಾನದ ಬಹುಮುಖ್ಯ ಅಂಗವೇ ಶ್ರುತಿ.

******************

ಯಕ್ಷಗಾನ ರಾಗಗಳು

ಯಕ್ಷಗಾನದಲ್ಲಿ ಕರ್ನಾಟಕಿ ಸಂಗೀತಕ್ಕೆ ಬಳಸುವ ರಾಗಗಳೇ ಹೆಚ್ಚು ಬಳಕೆಯಲ್ಲಿದೆ. ಬಡಗು ಹಾಗು ತೆಂಕುತಿಟ್ಟುಗಳು ಪುರಂದರದಾಸರ ಕಾಲದ ಕರ್ನಾಟಕ ಶೈಲಿಗೆ ಸಂಭಂದಿಸಿವೆ. ಬಡಗುತಿಟ್ಟಿನಲ್ಲಿ ಅಲ್ಲಲ್ಲಿ ಹಿಂದುಸ್ಥಾನಿ ರಾಗಗಳು ಬಳಕೆಯಾಗುತ್ತಿದೆ. ಪ್ರಸಂಗದ ಪ್ರಾರಂಭವನ್ನು ನಾಟಿ, ಮದ್ಯಮಾವತಿ, ಸೌರಾಸ್ಟ್ರ, ಭೈರವಿ ಮುಂತಾದ ರಾಗಗಳಿಂದ, ಮುಕ್ತಾಯವನ್ನು ಬಿಲಹರಿ, ಮೊಹನ, ಸಾವೇರಿ ರಾಗಗಳಿಂದಲೂ ಮಾಡುವುದು ರೂಡಿಯಲ್ಲಿದೆ. ಸುಮಾರು 80ಕ್ಕೂ‌ ಅಧಿಕ ರಾಗಗಳು ಬಳಕೆಯಲ್ಲಿವೆ.

ತೆ೦ಕು ತಿಟ್ಟು ಹಾಗೂ ಬಡಗು ತಿಟ್ಟಿನ ಭಾಗವತಿಕೆ
ಶಂಕರಾಭರಣ, ಬೇಗಡೆ, ಕಲ್ಯಾಣಿ, ಅರಭಿ, ಕಾಂಬೋದಿ, ಮುಖಾರಿ, ತೋಡಿ, ತುಜಾವಂತು, ಅಠಾಣ, ದೇವಗಾಂದಾರಿ, ಕಾಫಿ, ಹಿಂದೋಳ, ಖರಹರಪ್ರಿಯ, ಸುರುಟಿ, ನವರೋಜು, ಪಂತುವರಾಲಿ ಹಂಸಾನ್ಂದಿ, ದೇಶ್, ಫೂವಭೂಪಾಲಿ, ಚಾಂದ್, ಭೇಹಾಗ್, ಕಾನಡ, ಮುಂತಾದ ರಾಗಗಳು ಬಳಕೆಯಲ್ಲಿವೆ. ಹಳೆಯ ಪ್ರಸಂಗದ ಪದ್ಯಗಳನ್ನು ಇಂತಹದ್ದೆ ರಾಗಗಳಲ್ಲಿ ಹಾಡಬೇಕೆಂಬ ನಿಯಮವಿದೆ. ಉಚ್ಚ ಶ್ರುತಿಯಲ್ಲಿ ಹಾಡುವುದು, ರಾಗದಲ್ಲಿ ವಿಶಿಷ್ಟವಾದ ಎಳೆತಗಳು, ಎರಡು ಮೂರು ತಾಳಗಳ ಬಳಕೆ, ಪಾತ್ರಧಾರಿಯ ಸಾಮರ್ಥ್ಯವನ್ನು ತಿಳಿದು ಹಾಡುವುದು ಮುಂತಾದವುಗಳು ಯಕ್ಷಗಾನಕ್ಕೂ ಇತರ ಸಂಗೀತ ಪ್ರಭೇದಗಳಿಗಿರುವ ವ್ಯತ್ಯಾಸ.

ಪ್ರತೀ ತಾಳದ ಪದ್ಯಗಳನ್ನು ಒಂದು ಸಾಲು ಹೇಳಿದ ಮೇಲೆ ಅದೆ ತಾಳದಲ್ಲಿ ಮುಕ್ತಾಯ ಹೇಳಿ ನಂತರ ಮುಂದುವರಿಸುವುದು ತೆಂಕು, ಹಾಗು ಬಡಗು ತಿಟ್ಟಿನಲ್ಲಿ ಚಾಲ್ತಿಯಲ್ಲಿದೆ ಆದರೆ ಪ್ರಾರಂಭದ ಮತ್ತು ಕೊನೆಯ ಮುಕ್ತಾಯದ ಅವಧಿ ಮಾತ್ರ ಒಂದಕ್ಕೊ೦ದು ವಿರುಧ್ಧವಾಗಿದೆ. ಬಡಗುತಿಟ್ಟಿನ, ಕೊನೆಯ ಹಾಗು ಮೊದಲ ಮುಕ್ತಾಯದ ಆವೃತ್ತ ಒಂದೇ ಆಗಿದೆ. ಹಾಡಿನ ಬಾವಕ್ಕೆ ತಕ್ಕಂತೆ ನವರಸಗಳನ್ನು ತೋರಿಸುವುದು, ನೃತ್ಯಕ್ಕನುಗುನವಾಗಿ ಹಾಡು ಹಿಗ್ಗುವುದು ಅಥವ ಕುಗ್ಗುವುದು, ಸಮಶ್ರುತಿಯಲ್ಲಿ ಹಾಡುವುದು ಮುಂತಾದವುಗಳು ಯಕ್ಷಗಾನದ ಹಾಡುಗಾರಿಕೆಯ ವೈಶಿಷ್ಯ.


ತಾಳಗಳು:

ಕಾಲವನ್ನು ಸಮ ಪ್ರಮಾಣದಲ್ಲಿ ಅಳೆಯುವ ವಿಧಾನಕ್ಕೆ ತಾಳವೆನ್ನುವರು. ತಾಳದ ಗತಿಯಲ್ಲಿ ಕಾಣುವ ಒಂದು ಪ್ರಮಾಣಾನುರೂಪವೆ ಅಥವಾ ಸಾಮಂಜಸ್ಯವೇ ಲಯ. ಯಕ್ಷಗಾನದಲ್ಲಿ ಸರಳ ಲಯದ ತಾಳಗಳು ಬಳಕೆಯಲ್ಲಿವೆ. ಘಾತ ಹಾಗು ಹುಸಿ ಪೆಟ್ಟುಗಳನ್ನು ತೋರಿಸುವ ಕ್ರಮವಿದೆ. ತಾಳದ ಪೆಟ್ಟುಗಳ ಕಾಲ ಪ್ರಮಾಣವನ್ನು ಕಳೆಗಳಾಗಿ ವಿಭಾಗಿಸುವುದಕ್ಕೆ ಗತಿ ಅಥವ ನಡೆಯೆನ್ನುವರು. ಸಾಮಾನ್ಯವಾಗಿ ಒಂಬತ್ತು ವಿವಿಧ ರಾಗಗಳನ್ನು ಯಕ್ಷಗಾನದಲ್ಲಿ ಗುರುತಿಸಬಹುದು, ಅವುಗಳು - ಆಧಿತಾಳ , ಏಕ ತಾಳ, ಕೋರೆ ತಾಳ, ಅಷ್ಟ ತಾಳ, ಮಟ್ಟೆ ತಾಳ, ರೂಪಕ ತಾಳ ತ್ರೀವುಡೆ ತಾಳ , ಝಂಪೆ ತಾಳ ಮತ್ತು ಧ್ರುವ ತಾಳ. ಸಾಮಾನ್ಯವಾಗಿ ಮಟ್ಟೆ ಮತ್ತು ರೂಪಕ ತಾಳದ ನಡೆ ಒಂದೇ ಆಗಿದ್ದು ರೂಪಕ ತಾಳವು ನಿಧಾನ ಮಟ್ಟೆ ತಾಳವೇ ಆಗಿದೆ. ನಿರ್ದಿಷ್ಟ್ಠವಾದ ತಾಳವು ಒಂದು ಬಾರಿ ಮುಗಿಯುವದಕ್ಕೆ ಆವರ್ತ ಅನ್ನುವರು. ಪ್ರತಿಯೊಂದು ತಾಳಕ್ಕೂ ಅದರದ್ದೆ ಆದ ಮುಕ್ತಾಯವಿರುತ್ತದೆ.


ಆದಿತಾಳ : ಚತುರಶ್ರ ಜಾತಿಯ ಒಂದು ಲಘು ಎರಡು ದುತಗಳು ಇದರ ಲಕ್ಷಣ

1 2 3 4 5 6 7 8
ತಾ ಹಸ್ತ ದಿಂದ ದಿಕುತಕ ತಾ ತೋ ತದ್ದಿ ನಕ

ಮುಕ್ತಾಯ : ತಾ ಕಿಟ ಕಿಟ ತಕ ತೋದಿನ್ನಕ ದಿಕುತಕ
                 ದಿನ್ನ ಕಿಟತಕ ಧೀಂ ದಿನ್ನಾ ಕಿಟತಕ ಧೀಂ ದಿನ್ನ ಕಿಟತಕ ಧೀಂ



ಮಟ್ಟೆತಾಳ: ಹತ್ತು ಮಾತ್ರಾ ಕಾಲದ್ದು ಝಂಪೆಯ ಜಾತಿಯಂತಿದ್ದು ಹೆಚ್ಚು ಪ್ರಚಾರದಲ್ಲಿಲ್ಲ. ಯಕ್ಷಗಾನದಲ್ಲಿದು ತ್ವರಿತ ರೂಪಕದಲ್ಲಿದೆ.



ದ್ರುವ ತಾಳ : ಒಟ್ಟು ಹದಿನಾಲ್ಕು ಮಾತ್ರೆಗಳು. ತ್ರಿವುಡೆ ತಾ ಕ್ಕೆ ಸಮಾನವಾದ್ದರಿಂದ ಇದರ ಬಳಕೆ ಕಡಿಮೆ ಪಂಚವಟಿ ಪ್ರಸಂಗದ “ಮಾರೀಚ ನಿಶಾಚರ” ಪದ್ಯವನ್ನು ಈ ತಾಳದಲ್ಲಿ ಹೇಳ ಬಹುದು.



ರೂಪಕ ತಾಳ : ಆರು ಮಾತ್ರಾ ಕಾಲ ಎರಡು ಘಾತ ಒಂದು ಹುಸಿ

1 2 3 4 5 6
ತೈ ತದ್ದಿ ನ್ನಕ ಧೀಂ ತದ್ದಿ ನ್ನಕ

ಮುಕ್ತಾಯ : ದಿನ್ನದಿಂ ದಿನ್ನದಿಂ ದಿನ್ನದಿಂ ತೈತ ತಾಂ ತಾಂ ಕಡ್ತಕ ದಿನ್ನ (ದಿಂ)




ಝಂಪೆ ತಾಳ : ಹತ್ತು ಮಾತ್ರಾ ಕಾಲದ್ದು ಐದು ಮಾತ್ರಾ ಕಾಲದಲ್ಲೂ ಬಳಕೆ ಯಲ್ಲಿದೆ ನಾಲ್ಕು ಮಾತ್ರಾ ಕಾಲದ ಒಂದು ಘಾತ ಎರಡು ಮಾತ್ರಾ ಕಾಲದ ಒಂದು ಘಾತ

1 2 3 4 5 6 7 8 9 10
ಧೀಂ ಕಿಟ ಧೀಂ ಧೀಂ ಕಿಟ ಧೀಂ ಕಿಟ ಧೀಂ ಧೀಂ ಕಿಟ
೧೦ ಮಾತ್ರೆ ಗಳು

1 2 3 4 5
ಧೀಂ ಕಿಟ ಧೀಂ ಧೀಂ ಕಿಟ
ಐದು ಮಾತ್ರೆಗಳು

ಮುಕ್ತಾಯ: ತಾತಾ ಕಡ್ತಕ ತಾಗಡ ತದ್ದಿನ್ನಕ ತೈ ತಕ ತದಿಗಿಣ ತೋಂ

ತ್ವರಿತ ಗತಿ : ತೈ ತತೋಂ ತಾಗಡತದ್ದಿನ್ನ

ಮುಕ್ತಾಯ : ತೋಂ ತತ್ತಾಂ ತಗಡ ತದ್ದಿನ್ನ ದಿಗಡತದ್ದಿನ್ನ ತೈತ ದಿನ್ನ ದೀಂ




ತ್ರಿವುಡೆ ತಾಳ : ಏಳು ಮಾತ್ರಾ ಕಾಲದ್ದು ಮೂರು ಮಾತ್ರೆಯ ಒಂದು ಘಾತ ಎರಡೆರಡು ಮಾತ್ರೆಗಳ ಎರಡು ಘಾತ
1 2 3 4 5 6 7
ದಿಕುತಕ ದಿ ಕು ದಿಕುತಕ

ಮುಕ್ತಾಯ : ತಾ ಕಿಟ ತಕ ತರಿಕಟ ಕಿಟತಕ
ತಾ ತೈ ತಕ ದಿತ್ತಾ ದದಿಗಿಣ (ದೀಂ)

ತ್ವರಿತ ಗತಿ : ನ್ನಾಂತ ತ್ತದ್ದೀಂ ನ್ನಾಂತ ತಕದೀಂ

ಮುಕ್ತಾಯ: ತಾಕಡ್ ತ್ಕ ತರ್ ಕ್ ಡ್ ಕಡ್ತ ತಾತೈ ತ ದಿತ್ತಾ ದಿನ್ನ (ಧೀಂ)




ಆಷ್ಟ ತಾಳ : ಹದಿನಾಲ್ಕು ಮಾತ್ರಾ ಕಾಲದ್ದು. ಮೊದಲನೇ ಘಾತಕ್ಕೆ ಮೂರು ಮಾತ್ರೆ ಎರಡನೇ ಘಾತಕ್ಕೆ ಎರಡು, ಮುರನೇ ಘಾತಕ್ಕೆ ಎರಡು ಮಾತ್ರೆಗಳು.

1 2 3 4 5 6 7
ದ್ದಿಂ ತತ್ತ ದೀಂ ತದ್ದಿಂ ತತ್ತ ದೀಂ

ಮುಕ್ತಾಯ :

ತ ಕ್ಕು ತಾ ಕಿಟ
ತ ಕಿಟ ಕಿಟ ಕಿಟ ತಕ
ದ ದಿಂನ್ನಾಂತಾ
ತೈ ಯ್ಯ ದದಿಗಿಣ (ದೀಂ)

ತ್ವರಿತ ಗತಿ : ತೈಯ ತಾತಾ ತಾ ತೈಯ್ಯ ತಾತ

ಮುಕ್ತಾಯ : ತೋ ದಿನ್ನ ತಕದಿನ್ನ ತೈತ ದಿನ್ನಾ ದಿನ್ನ (ಧಿಂ)




ಏಕತಾಳ :
ತದ್ದೀಂ ದಿಮಿತ ದೀಂ ಮುಕ್ತಾಯ : ತೋಮ್ತ ದಿನ್ನತಾಕಿಟ್ ದಿತ್ತಾ ತೈ ಯ್ಯತ್ತ ದಿನ್ನ (ಧೀಂ)

ಇವಿಷ್ಟು ತಾಳಗಳ ಸೂಕ್ಷ್ಮ ಪರಿಚಯ. ತಾಳಗಳು ಬದಲಾಗುವ ಕ್ರಮವೂ ಯಕ್ಷಗಾನದಲ್ಲಿದೆ. ಅಷ್ಟದಿಂದ ಏಕ, ಕೋರೆತಾಳಕ್ಕೆ, ತ್ರಿವುಡೆಯಿಂದ‌ ಏಕ ಕೋರೆತಾಳಕ್ಕೆ, ಅಷ್ಟದಿಂದ ತ್ವರಿತ ಏಕಕ್ಕೆ, ಝಂಪೆಯಿಂದ ಝಂಪೆ ಎರಡನೇ ತಾಲಕ್ಕೆ, ಆದಿತಾಳದಿಂದ ಏಕ ಕೋರೆ ತಾಳಕ್ಕೆ ಹೋಗಿ ಮುಕ್ತಾಯ ಹೀಗೆ.




******************

ಪ್ರಸಂಗ ಸಾಹಿತ್ಯ

‘ಪ್ರಸಂಗ’ವೆಂದರೆ ಪದ್ಯಗಳ ಮೂಲಕ ಹೆಣೆಯಲ್ಪಡುವ ಕಥಾ ಸನ್ನಿವೇಶ. ಇದು ಪ್ರದರ್ಶನದ ಪಠ್ಯವೂ ಹೌದು. ಕಥೆಯ ನಡೆಗೆ ಇದುವೇ ಆದಾರ. ಕಥೆಯನ್ನು ಆರಿಸಿ ಕೊಳ್ಳುವಾಗ ಕವಿಯ ಹೊಣೆಗಾರಿಕೆ ಮಹತ್ವದ್ದು. ಅದು ಕೇವಲ ರಂಜನೆಯಾಗಿರದೆ ಸತ್ವಭರಿತವಾಗಿರಬೇಕು. ಪುರಾಣ ಕಥೆಗಳಲ್ಲಿ ಸಾರ್ವಕಾಲಿಕ ಮೌಲ್ಯವುಳ್ಳವುಗಳಾದರೆ ಸಮಕಾಲೀನ ಸಮಾಜಕ್ಕೆ ಉಪಯುಕ್ತವಾಗಿರುವಂತಾದರೆ ಅದನ್ನು ಹಾಗೆ ಮುಂದಿಡಬಹುದು. ಹಳೆಯ ಕೆಲವು ಸವಕಲು ಅರ್ಥಶೂನ್ಯ ವಿಚಾರಗಳನ್ನು ಇಂದು ಮೌಲ್ಯಗಳೆಂದು ಕರೆಯುವಂತಿಲ್ಲ. ಇಂಥಹ ಸಂದರ್ಭದಲ್ಲಿ ಇಂದಿನ ದೃಷ್ಟಿ ದೋರಣೆಗಳಿಗೆ ಸರಿಯಾಗಿ ಪುರಾಣ ಘಟನೆಗಳನ್ನು ಪುನರ್ ರಚಿಸ ಬೇಕಾಗುತ್ತದೆ.

ಬಡಗು ತಿಟ್ಟಿನ ಭಾರೀ ಗಾತ್ರದ ಪಗಡೆ ವೇಷ
( ಚಿತ್ರ ಕೃಪೆ : ಪ್ರಕಾಶ್ ಹೆಗ್ಡೆ )
ಯಕ್ಷಗಾನ ಕೃತಿಗಳು ಬಹು ಮಟ್ಟಿಗೆ ಸಂವಾದದಿಂದಲೇ ಕೂಡಿದೆ. ಸಂವಾದವನ್ನು ಹೊಸೆಯುವಾಗ ಭಿನ್ನ ಭಿನ್ನ ಛಂದಸ್ಸುಗಳಲ್ಲಿ ಆಯಾಯ ಪಾತ್ರಗಳ ಸ್ವಭಾವಕ್ಕನುಗುಣವಾದ ಶೈಲಿ, ಶಬ್ದಗಳನ್ನು ಉಪಯೋಗಿಸಬೇಕು. ಒಂದೇ ತಾಳದಲ್ಲಿ ಹೇಣೆಯಲಾದ ಸುದೀರ್ಘ ಸಂಭಾಷಣೆ ಏಕತಾನತೆಯನ್ನು ಉಂಟುಮಾಡುತ್ತವೆ. “ದ್ರೌಪದೀ ಪ್ರತಾಪ”ದಲ್ಲಿ ಹೆಚ್ಚಿನ ಪದ್ಯಗಳು ಝಂಪೆ ತಾಳದಲ್ಲಿ ಇರುವುದನ್ನು ಗಮನಿಸ ಬಹುದು. ವೀರರಸಕ್ಕೆ ಬಳಸುವ ರಾಗ ತಾಳಗಳನ್ನು ಯುದ್ದ ಸನ್ನಿವೇಷಕ್ಕೆ ಮತ್ತು ಪುಂಡು ವೇಷಗಳಿಗೆ ಬಳಸ ಬೇಕೆ ವಿನಹ ಕರುಣ ರಸದ ನೀಲಾಂಬರಿ, ಆನಂದ ಭೈರವಿ ರಾಗದ ಕೋರೆ ತಾಳದ ಪದ್ಯಗಳನ್ನು ಬಳಸಬಾರದು. ಎಲ್ಲಾ ಸ೦ದರ್ಭದಲ್ಲೂ ತಾಳದ ಸಾಹಿತ್ಯವನ್ನೇ ಬಳಸಿದರೆ ಭಾಗವತನಿಗೆ ತೋರಿಸಿಕೊಳ್ಳಲು ಅಸಾದ್ಯ. ಹಾಗಾಗಿ ಭಾಮಿನಿ, ವಾರ್ದಕ್ಯ , ಕಂದ ಪದ್ಯಗಳನ್ನು ಅಲ್ಲಲ್ಲಿ ತುರುಕಿಸುವುದು ರೂಢಿ. ಇವು ಕೆಲವೊಮ್ಮೆ ಕವಿ ವಾಣಿಯೂ ಆಗಿರುತ್ತವೆ. ಈ ಪದ್ಯಗಳನ್ನು ಭಾಗವತನು ಪಕ್ಕ ವಾದ್ಯವಿಲ್ಲದೆ ಭಾವಕ್ಕನುಗುಣವಾಗಿ ತನಗನುಕೂಲವಾದ ರಾಗದಲ್ಲಿ ಹಾಡಬಹುದು. ಇಲ್ಲಿ ಸನ್ನಿವೇಶದ ತೀವ್ರತೆಯನ್ನು ಪ್ರೇಕ್ಷಕ ಅನುಭವಿಸಬಹುದು.

ಹೆಚ್ಚಿನ ಪ್ರಸಂಗಕರ್ತರು ರಾಮಾಯಣ, ಭಾರತದಲ್ಲಿನ ಪದ್ಯಗಳನ್ನು ಯಥಾವತ್ತಾಗಿ ಯಕ್ಷಗಾನಕ್ಕೆ ತಂದಿದ್ದಾರೆ. ಇದು ರಚನೆಗೆ ಕೊಟ್ಟ ಗೌರವ ವಿನಹ ಕೃತಿ ಚೌರ್ಯ್ವವಲ್ಲ. ಉದಾ: ಕರ್ಣಾರ್ಜುನ ಕಾಳಗದ “ಮಾತೆಗಿತ್ತೆನು ಭಾಷಯನು” ಪದ್ಯ. ಇತ್ಯಾದಿ. ಕರ್ಣನ ಹುಟ್ಟು ತಿಳಿಯದಿರುವ ಪಾತ್ರಗಳು ಸಹ ಪದ್ಯದಲ್ಲಿ “ಎಲೆ ಭಾನುಜಾತ” ಎಂದೇ ಸಂಬೋದಿಸುತ್ತವೆ. ಇದನ್ನು ಕವಿವಾಣಿಯೆಂದೆ ಪರಿಗಣಿಸಬೇಕಾಗುತ್ತದೆ. ಕರ್ಣನ ಹುಟ್ಟು ತಿಳಿಯದ ಶಲ್ಯ ಕರ್ಣನನ್ನು ಹಾಗೆ ಕರೆಯುವುದು ಕರ್ಣಾರ್ಜುನ ಕಾಳಗದಲ್ಲಿ ಗಮನಿಸಬಹುದು. ಕೃಷ್ಣ ಸಂಧಾನದಲ್ಲಿ ಕವಿ ಕೌರವನನ್ನು “ಕಾಮುಕ ಕುರು ಭೂಕಾಂತನ” ಎಂದು ಛಲದಂಕ ಚಕ್ರೇಶ್ವರನನ್ನು ಕರೆದದ್ದು ಎಷ್ಟು ಸಮಂಜಸವೋ?. ಯೋಚಿಸ ಬೇಕಾಗುತ್ತದೆ. ಹಾಗೆಯೆ ರಂಗದಲ್ಲಿ ನಡೆಯುವ ಘಟನೆಯ ಸಂಭಾಷಣೆಯಲ್ಲಿ ಭವಿಷ್ಯದಲ್ಲಿ ನಡೆಯುವ ಘಟನೆಗಳ ಉದಾಹರಣೆ ಹಾಗು ಪದ್ಯಗಳು ಬರಬಾರದು. ರಾಮಾಯಣ ಪ್ರಸಂಗಗಳಲ್ಲಿ ಮಹಾಭಾರತದ ಉದಾಹರಣೆ ಬರುವ ಪದ್ಯಗಳು ಬರಬಾರದು.

ಪಾರ್ತಿಸುಬ್ಬನು ಯಕ್ಷಗಾನಕ್ಕೆ ಹಲವು ಪ್ರಸಂಗ ನೀಡಿದ ಕವಿ. ಅದೆ ಕಾಲದ ದೇವಿದಾಸರು ‘ಕೃಷ್ಣ ಸಂಧಾನ’, ‘ಭೀಷ್ಮಪರ್ವ’ ‘ದೇವಿ ಮಹಾತ್ಮೆ’ ‘ಗಿರಿಜಾ ಕಲ್ಯಾಣ’ ದಂತಹ ಉತ್ತಮ ಪ್ರಸಂಗ ರಚಿಸಿದ್ದಾರೆ. ಈತನ ಭಾರತ ಪ್ರಸಂಗಕ್ಕೆಲ್ಲ ಕುಮಾರವ್ಯಾಸ ಭಾರತವೆ ಆಧಾರ. ಈತನ ರಚನೆಯಲ್ಲಿ ‘ಕೃಷ್ಣ ಸಂಧಾನ’ ಪ್ರಸಿಧ್ಧವಾಗಿದ್ದು, ತಾಳಮದ್ದಳೆಯಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ಕೃಷ್ಣನ ರಾಜತಾಂತ್ರಿಕ ವ್ಯವಸ್ಥೆ ಹೆಚ್ಚು ಬಣ್ಣಿಸಲಾದರೂ ದೃಶ್ಯ ಸಂಯ್ಯೋಜನೆಯಿಲ್ಲದೆ ರಂಗದಲ್ಲಿ ಈ ಪ್ರಸಂಗ ಹೆಚ್ಚು ಪ್ರಸಿಧ್ಧವಾಗಿಲ್ಲ. ಅಲ್ಲದೆ ಕೃಷ್ಣನ ವ್ಯಂಗ್ಯದ ಮಾತು ಹೆಚ್ಚು ಉಲ್ಲೇಖಿಸಲ್ಪಟ್ಟಿದೆ. ಉದಾ; ‘ ಚರಣ ನಿನಗೆ ಬಲು ನೋವಾಯಿತಲ್ಲ.

ಸುಮಾರು 19ನೆ ಶತಮಾನದಲ್ಲಿ ನೂತನ ಹೆಜ್ಜೆಯಿಟ್ಟ ಕವಿ ಮುದ್ದಣ್ಣನ “ಕುಮಾರ ವಿಜಯ” ಉತ್ತಮ ಛಂದಸ್ಸು, ಹಾಗೂ ವೈವಿಧ್ಯಮಯ ರಾಗ ತಾಳದಿಂದ ಗಮನ ಸೆಳೆಯುತ್ತದೆ. “ರತ್ನಾವತಿ ಕಲ್ಯಾಣ” ಪುರಾಣಾಂತರ್ಗತ ಕಥೆ ಅಲ್ಲದಿದ್ದರೂ ಪ್ರದರ್ಶನ ಯೋಗ್ಯವಾದ ಸಾಹಿತ್ಯದಿಂದ ಕೂಡಿದ ಕೃತಿಯಾಗಿದೆ. ಉಪಮ, ರೂಪಕ, ಅಲಂಕಾರಗಳಿಂದ ಕೂಡಿದ ಪದ್ಯಗಳಲ್ಲಿ ಶೃ೦ಗಾರ, ವೀರ, ರೌದ್ರ, ಕರುಣಾರಸಗಳು ಬಿಂಬಿತವಾಗಿವೆ

ತೆ೦ಕು ತಿಟ್ಟಿನ ಸುಪ್ರಸಿಧ್ಧ ತುಳು ಪ್ರಸ೦ಗ ಕೋಟಿ-ಚೆನ್ನಯ ಪ್ರಸ೦ಗದ ದೃಶ್ಯ
ಯಕ್ಷಗಾನದ ಆಧುನೀಕರಣದಿಂದ ಪ್ರಸಂಗ ರಚನೆಯಲ್ಲಿ ಪರೀಷ್ಕರಣೆ ಉಂಟಾದವು. ಪುರಾಣ ಕಥೆ ಆಯ್ಕೆ ಮಾಡುವುದು ಕಷ್ಟವಾದಾಗ ಯಕ್ಷಗಾನಕ್ಕೆ ಒಪ್ಪುವ ಪುರಾಣಾಂತರ್ಗತ ಪ್ರಸಂಗಗಳು ಬಂದವು. ಇಡಗುಂಜಿ ಮೇಳದವರ “ಬ್ರಹ್ಮ ಕಪಾಲ”, “ಸತ್ಯ ಹರಿಶ್ಚಂದ್ರ“, “ರಾಮ ನಿರ್ಯಾಣ’, “ವಾಸವದತ್ತೆ” ಸಾಲಿಗ್ರಾಮ ಮೇಳದವರ ‘ವಸಂತ ಸೇನೆ” ‘ಚಂದ್ರ ಹಾಸ’ ವೀರಭದ್ರ ನಾಯಕರ ‘ಬೇಡರ ಕಣ್ಣಪ್ಪ’ ಇವುಗಳನ್ನು ಈ ಸಾಲಿಗೆ ಸೇರಿಸಬಹುದು.

ನಂತರದ ಕಾಲದಲ್ಲಿ ವೃತ್ತಿ ಮೇಳಗಳು ವ್ಯಾಪಾರೀಕರಣ ದೃಷ್ಟಿಯಿರಿಸಿಕೊಂಡು ಪ್ರದರ್ಶನ ನೀಡುವಾಗ ಪೌರಾಣಿಕವಲ್ಲದ ಹೊಸ ಪ್ರಸಂಗಗಳು ಅನಿವಾರ್ಯವಾದವು. ಅದರಲ್ಲಿ ಬಡಗುತಿಟ್ಟಿನ ಕಾಳಿಂಗ ನಾವಡ ವಿರಚಿತ ‘ನಾಗಶ್ರೀ’ಮತ್ತು ತೆಂಕುತಿಟ್ಟಿನ ಅನಂತರಾಮ್ ಬಂಗಾಡಿ ವಿರಚಿತ ‘ಕಾಡ ಮಲ್ಲಿಗೆ’ ಪ್ರಸಂಗಗಳು ದಾಖಲೆ ನಿರ್ಮಿಸಿವೆ. ಬಳಿಕ ವೃತ್ತಿ ಮೇಳಕ್ಕೆ ಕಂದಾವರ ರಘುರಾಮ ಶೆಟ್ಟರ ರತಿರೇಖ, ಬನಶಂಕರಿ, ಚೆಲುವೆ ಚಿತ್ರಾವತಿ , ಶೂದ್ರ ತಪಸ್ವಿನಿ, ವಧು ಮಾದವಿ, ಚಂದ್ರಶೇಖರ ಶೆಟ್ಟರ ರಾಜನರ್ತಕಿ, ಚೈತ್ರಪಲ್ಲವಿ, ಪದ್ಮಪಲ್ಲವಿ, ರಂಗನಾಯಕಿ ಪ್ರಸಂಗಗಳು ಅದ್ಬುತ ಯಶಸ್ಸನ್ನು ತಂದುಕೊಟ್ಟವು. ಹಾಗೇಯೆ ತೆಂಕುತಿಟ್ಟಿನಲ್ಲಿ ಅಮೃತ ಸೋಮೇಶ್ವ್ರರರ ಹಾಗು ರಾಘವ ನಂಭಿಯಾರರ ಪೌರಾಣಿಕ ನೆಲೆಗಟ್ಟನ್ನು ಹೊಂದಿದ ಛಂದೋಬದ್ದವಾದ ಪ್ರಸಂಗಗಳು ಅದ್ಬುತ ಯಶಸ್ಸನ್ನು ಹೊಂದಿದವು. ಇವೆಲ್ಲವೂ ಪ್ರದರ್ಶನ ಯೋಗ್ಯ ಪ್ರಸಂಗವೆನ್ನುವಲ್ಲಿ ಎರಡು ಮಾತಿಲ್ಲ‌. ಇಷ್ಟೆಲ್ಲಾ ಇದ್ದರೂ ಯಕ್ಷಗಾನ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಡೆಗಣಿಸಿದ್ದು ನಮ್ಮ ದೌರ್ಭ್ಹಾಗ್ಯವೇ ಸರಿ. ಈ ಕಲೆ ಜಾನಪದವಾಗಿ ಉಳಿಯಲು ಇದೂ ಒಂದು ಕಾರಣವಿರಬಹುದು.

ಕೆಲವು ಪ್ರಸಂಗಗಳು ರಂಗದಲ್ಲಿ ಯಶಸ್ಸು ಕಂಡರೂ ಕೃತಿಯಲ್ಲಿ ಕಳಪೆಯಾಗಿರುತ್ತದೆ. ಛಂದೋಬದ್ದವಾಗಿ ಓದುವುದು, ಹಾಡುವುದು ಕಷ್ಟವಾಗುತ್ತದೆ. ಪದ್ದ್ಯಗಳು ಸೀಮಿತವಾದಾಗ ಪಾತ್ರ ಪೊಷಣೆ ಸಮರ್ಪಕವಾಗದೆ ಪ್ರದರ್ಶನ ಸಂದರ್ಭ್ಹದಲ್ಲಿ ಕಲಾವಿದನಿಗೆ ಹೆಚ್ಚಿನ ಹೊರೆ ಬೀಳುತ್ತದೆ. ಇಂದಿನವರೆಗೆ ಸಾವಿರಕ್ಕೂ ಅದಿಕ ಪ್ರಸಂಗ ರಚನೆಯಾದರೂ ಪ್ರದರ್ಶನಗೊಂಡವು ಕೆಲವು ಮಾತ್ರ. ಯಾಕೆಂದರೆ ಕೆಲವು ಕವಿಗಳು ಪ್ರಸಂಗವನ್ನು ಕಾವ್ಯದಂತೆ ರಚಿಸಿದ್ದಾರೆ. ಯಕ್ಷಗಾನ ಕೃತಿಯನ್ನು ಕನ್ನಡ ಕಾವ್ಯಕ್ಕೇ ಹೋಲಿಸಿ ಸಮಾನತೆ ನೀಡಿದಲ್ಲಿ ಯಕ್ಷಗಾನಾಸಕ್ತರು ಧನ್ಯರಾಗುತ್ತಾರೆ. ಪ್ರಸಂಗ ಕೃತಿಯು ಕಾವ್ಯದ ಗುಣ ಸ್ವರೂಪ ಹೊಂದಿದಾಗಲೂ ಅದನ್ನು ಕಾವ್ಯವೆಂದೋ ಸಾಹಿತ್ಯ ಕೃತಿಯೆಂದು ಜನ ಯಾಕೆ ಒಪ್ಪುವುದಿಲ್ಲ.

ಕನ್ನಡ ಸಾಹಿತ್ಯದಲ್ಲಿ ನಾಟಕವೂ ಒಂದು. ಆಧುನಿಕ ಬರಹಗಾರರು ಅನೇಕ ನಾಟಕ ರಚನೆಮಾಡಿ ಸಾಹಿತ್ಯಕ್ಕೆ ಕೀರ್ತಿ ತಂದಿದ್ದಾರೆ. ನಾಟಕಕ್ಕೂ ಯಕ್ಷಗಾನ ಸಾಹಿತ್ಯಕ್ಕು ಬಹಳ ಸಾಮ್ಯವಿದೆ. ಸಂಗೀತ ನಾಟಕದಲ್ಲಿ ಅಲ್ಲಲ್ಲಿ ಹಾಡುಗಳಿವೆ. ನಾಟಕವು ಗದ್ಯ ಪ್ರಧಾನವಾದರೆ ಯಕ್ಷಗಾನವು ಪದ್ಯ ಪ್ರಧಾನ. ನಾಟಕದಲ್ಲಿ ಬರೆದ ಮಾತುಗಳನ್ನೇ ಪಾತ್ರಧಾರಿ ಆಡುತ್ತಾನೆ. ಯಕ್ಷಾಗಾನ ಪದ್ಯಕ್ಕೆ ಒಬ್ಬೊಬ್ಬ ಪಾತ್ರಧಾರಿಯ ಮಾತು ಒಂದೊಂದು ತರಹವಿರುತ್ತದೆ. ಕಥಗೆ ಉಚಿತವೆಣಿಸುವ ಮಾತನ್ನು ಸ್ವಯಂ ಸೃಷ್ಟಿಸಿ ಮಾತನಾಡುತ್ತಾನೆ. ಆದುದರಿಂದ ಯಕ್ಷಗಾನವು ಸರ್ವಾಂಗವೂ ಇರುವ ನಾಟಕವಾಗಿದೆ “ಕಿರಿದರೊಳ್ ಪಿರಿದಾರ್ಥ” ನೀಡುವುದು ಯಕ್ಷಗಾನ ಪದ್ಯಗಳ ವೈಶಿಷ್ಟ್ಯ.

ಕಾಲ್ಪನಿಕ ಮತ್ತು ಪ್ರಕ್ಷಿಬ್ದ ಪ್ರಸಂಗಗಳು

ನಾಲ್ಕೈದು ದಶಕಗಳ ಹಿಂದೆ ಪ್ರಕ್ಷಿಬ್ದ ಪ್ರಸಂಗಗಳು ಅನೇಕರಿಗೆ ಅಸ್ಪಶ್ಯವಾಗಿದ್ದವು. ಈ ರೀತಿಯ ಪ್ರಸಂಗಗಳನ್ನು ಪ್ರದರ್ಶಿಸುವುದಾಗಲಿ, ನೋಡುವುದಾಗಲಿ ಪುರಾಣಗಳಿಗೆ ಮಾಡುವ ಅಪಚಾರ ಮಾತ್ರವಲ್ಲ ನೋಡುಗರನ್ನು ಅಪಮಾರ್ಗಕ್ಕೆಳೆಯುವ ಪಾಪ ಕಾರ್ಯವೆಂದು ತಿಳಿಯುವವರಿದ್ದರು. “ಕೃಷ್ಣಾರ್ಜುನ ಕಾಳಗ” ದಂತ ಪುರಾಣವಲ್ಲದ ಪ್ರಸಂಗದಲ್ಲಿ ಅರ್ಥ ಹೇಳಲಾರೆನೆಂದು ತಾಳಮದ್ದಳೆಯಿಂದ ಹೊರಟು ಹೋದ ಕಲಾವಿದರನ್ನು ನಾನು ನೋಡಿದ್ದೆನೆ ಎಂದು ಖ್ಯಾತ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು ಉಲ್ಲೇಖಿಸುತ್ತಾರೆ. (ನೋಡಿ: ಬಂಟರ ಯಕ್ಷಗಾನ ಕಲೋತ್ಸವ ಸ್ಮರಣ ಸಂಚಿಕೆ ‘ಒಡ್ಡೋಲಗ’ ಪುಟ 254). ಹಾಗಿದ್ದಲ್ಲಿ ಆಟ ಕೂಟದಲ್ಲಿ ಮೆರದ , ಅರ್ಜುನನ ಪಾತ್ರದಿಂದ ಮೆಲ್ಮಟ್ಟದ ಕಲಾವಿದರೆಂದು ಗುರುತಿಸಲ್ಪಟ್ಟ ಹಾರಾಡಿ ರಾಮ ಗಾಣಿಗರಿಗೆ, ಕೆರೆಮನೆ ಮಹಾಬಲ ಹೆಗಡೆಯವರಿಗೆ ಕೀರ್ತಿ ತಂದುಕೊಟ್ಟ ಪ್ರಸಂಗ ಪ್ರಕ್ಷಿಬ್ದ ಎಂದಾಯಿತು. ಅವರೇ ಹೇಳುವಂತೆ “ದಶರಥನು ಗುಟ್ಟಾಗಿ ರಾಮ ಪಟ್ಟಾಭಿಷೇಕ ನಿಶ್ಚಯಿಸಿದ” “ಶೂರ್ಪನಖಿ ಹದಿನಾರು ವರುಷದ ಹೆಣ್ಣಾದಳು” “ಸೀತೆಯನ್ನು ತರುವ ಮೊದಲು ರಾವಣ ಮಂಡೋದರಿಯ ಸಲಹೆ ಕೇಳಿದ” ಇವುಗಳೆಲ್ಲ ಪ್ರಕ್ಷಿಬ್ದ ಎಂದಾಯಿತು.

ಶ್ವೇತಕುಮಾರ ಚರಿತ್ರೆಯ ದೃಶ್ಯ
ಬಡಗುತಿಟ್ಟಿನ ನಡು ಪ್ರಾಂತ್ಯದಲ್ಲಿ ಪ್ರಸಿಧ್ಧಿ ಪಡೆದ ಲವ ಕುಶ ಕಾಳಗ ಅಥವಾ ಚಿತ್ರಪಠಸಂಧಿ ಪ್ರಸಂಗ, ಅದ್ಬುತವಾದ ಸಾಹಿತ್ಯ ಛಂದೋಬಂದದಿಂದ ಕೂಡಿದ ‘ರಾಮಾಂಜನೇಯ’ ಅಶ್ಲೀಲತೆಯಿಂದ ಕೂಡಿದ ‘ಚಂದ್ರಾವಳಿ ವಿಲಾಸ’ ‘ಶ್ವೇತ ಕುಮಾರ’, ಆರು ಬಾರಿಗೂ ಹೆಚ್ಚು ಮುದ್ರಣಗೊಂಡು ಬಯಲಾಟಕ್ಕೆ ಹೇಳಿ ಮಾಡಿಸಿದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ‘ವೀರಮಣಿ ಕಾಳಗ’ಪದ್ಮಪುರಾಣದಿಂದ ಆರಿಸಿದರೂ ಮೂಲರಾಮಾಯಣಕ್ಕೆ ಸಂಬಂದಿಸಿದ್ದಲ್ಲ. ವಿಶ್ವಾಮಿತ್ರ ಹೇಳಿದ ತಕ್ಷಣ ಶ್ರೀರಾಮನು ಶಕುಂತನನ್ನು ಕೊಲ್ಲಲು ಮುಂದಾದದ್ದು ಪ್ರಕ್ಷಿಬ್ದದ ಪರಮಾವಧಿಯನ್ನು ‘ರಾಮಾಂಜನೇಯದಲ್ಲಿ’ ಗಮನಿಸಬಹುದು.

ಕನಕಾಂಗಿ ಕಲ್ಯಾಣದ ಪಡಿಯಚ್ಚು ಎನ್ನಬಹುದಾದ ಇನ್ನೋಂದು ಪ್ರಸಂಗ ಮೈಂದ-ದಿವಿಜ ಕಾಳಗ ಅಥವಾ ರುಕ್ಮಾವತಿ ಕಲ್ಯಾಣ. ಬಲರಾಮನ ಮಗಳು ಕನಕಾಂಗಿಯನ್ನು ಅಭಿಮನ್ಯುವಿಗೆ ಕೇಳಲು ಹೊಗುತ್ತಳೆ ಸುಭದ್ರೆ. ಘಟೋತ್ಕಜನ ಮಾಯೆಯಿಂದ ಕನಕಾಂಗಿ ಅಭಿಮನ್ಯುವರ ವಿವಾಹ ನೆರವೇರುತ್ತದೆ. ಅಭಿಮನ್ಯುವಿನ ಹೆಂಡತಿ ಉತ್ತರೆಯೊ ಅಥವಾ ಕನಕಾಂಗಿಯೊ? ಅಣ್ಣ ರುಕ್ಮನ ಮಗಳನ್ನು ಮಗನಾದ ಮನ್ಮಥನಿಗೆ ಕೇಳಲು ಹೋಗುವುದು ರುಕ್ಮಿಣಿ. ಬಳಿಕ ಯಾದವರಿಗೂ ಕುಂಡಿನಪುರದವರಿಗೂ ಯುದ್ದವಾಗಿ ಮನ್ಮಥನೊಂದಿಗೆ ರುಕ್ಮಾವತಿಯ ಕಲ್ಯಾಣವಾಗುತ್ತದೆ. ಇಲ್ಲಿಯೂ ಅದೇ ಪ್ರಶ್ನೆ ಮನ್ಮಥನ ಹೆಂಡತಿ ರತಿಯೇ? ಇಲ್ಲಾ ರುಕ್ಮಾವತಿಯೇ? ಅಲ್ಲಿ ಅಭಿಮನ್ಯು ಬಲರಾಮನ ಸೋದರಳಿಯ, ಇಲ್ಲಿ ಮನ್ಮಥನು ರುಕ್ಮನ ಸೋದರಳಿಯ. ಸೋದರಿಕೆಯ ಸಮಕಾಲೀನ ಅದ್ಬುತ ಕಲ್ಪನೆಯೊಂದಿಗೆ ಮೂಡಿಬಂದ ಈ ಪ್ರಸಂಗಗಳೆರಡು ರಂಗದಲ್ಲಿ, ಜೋಡಾಟದಲ್ಲಿ, ಯಶಸ್ವಿಯಾಗಿದೆಯೆಂಬಲ್ಲಿ ಕಾಲ್ಪನಿಕವಾಗಲಿ, ಪ್ರಕ್ಶಿಬ್ದವಾಗಲಿ ಯಕ್ಷಗಾನದ ಚೌಕಟ್ಟಿನೊಳಗೆ ಮೂಡಿ ಬಂದ ಪ್ರಸಂಗಗಳು ಸ್ವೀಕಾರಾರ್ಹವೆ. ಪ್ರಕ್ಷಿಬ್ದವಾದರೇನು? ಕಾಲ್ಪನಿಕವಾದರೇನು? ಮೂಲವಾದರೇನು? ಒಳ್ಳೆಯ ಅದರ್ಶವನ್ನು ಜನಕೋಟಿಗೆ ನೀಡುವ ಯಕ್ಷಗಾನದ ಚೌಕಟ್ಟಿಗೆ ಒಪ್ಪುವ ಪ್ರಸಂಗಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸಬಹುದು.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Raghu Maiya(9/27/2015)
Thumba Dhaynavadagalu. Very well written article and nice to know the details of ThenkuThittu and BadaguThittu style. Raghu




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ